16ನೆಯ ಶತಮಾನದಲ್ಲಿ ಫ್ರೆಂಚ್ ರಾಜಕಾರಣದಲ್ಲಿ ಪ್ರವರ್ಧಮಾನ ವಾಗಿದ್ದ, ಲೊರೇನ್ ಡ್ಯೂಕ್ ಮನೆತನದ ಒಂದು ಕಿರಿ ಶಾಖೆ. ಇದರ ಸ್ಥಾಪಕ ಕ್ಲಾಡ್ ಡೀ ಲೊರೇನ್. ಈತ ಗ್ವೀಸಿನ ಪ್ರಥಮ ಡ್ಯೂಕ್ ಎನಿಸಿಕೊಂಡಿದ್ದ. 1ನೆಯ ಫ್ರಾನ್ಸಿಸ್ ಈತನನ್ನು ಡ್ಯೂಕನಾಗಿ (1496-1550) ನೇಮಿಸಿದ. ಇವನ ಮಗಳು, ಗ್ವೀಸಿನ ಮೇರಿ, ಸ್ಕಾಟ್ಲೆಂಡಿನ 5ನೆಯ ಜೇಮ್ಸ್ನನ್ನು ಮದುವೆಯಾದಳು. ಸ್ಕಾಟರ ರಾಣಿ ಮೇರಿಯ ತಾಯಿ ಆಕೆ. ಇವನ ಮಗ ಫ್ರಾಂಕಾಯ್ ದ ಲೊರೇನ್ (1519-63) ಗ್ವೀಸಿನ 2ನೆಯ ಡ್ಯೂಕ್ ಆಗಿದ್ದ. ಇನ್ನೊಬ್ಬ ಮಗ ಚಾರಲ್ಸ್ ದ ಗ್ವೀಸ್ (ಸು. 1525-1574) ಕಾರ್ಡಿನಲ್ ದ ಲೊರೇನ್ ಆಗಿದ್ದು, ಸ್ಕಾಟರ ರಾಣಿ ಮೇರಿಯ ಮೊದಲನೆಯ ಗಂಡನಾಗಿದ್ದ 2ನೆಯ ಫ್ರಾನ್ಸಿಸನ ಕಾಲದಲ್ಲಿ ಫ್ರೆಂಚ್ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿದ್ದ.                       	(ಎಚ್.ಆರ್.ಆರ್.ಐ.)

ಈ ಮನೆತನದವರು ಹ್ಯೂಜೆನೋಗಳ ವಿರುದ್ಧ ಕೆಥೊಲಿಕರನ್ನು ಬೆಂಬಲಿಸಿದರಲ್ಲದೆ ಅನ್ಬಾದ ಪಿತೂರಿಯನ್ನು ನಿರ್ದಯೆಯಿಂದ ದಮನಮಾಡಿದರು. ಫ್ರಾನ್ಸಿಸನ ಮರಣಾನಂತರ ಕ್ಯಾದರೀನ್ ದ ಮೆಡಿಚಿಯನ ಉದಾರ ನೀತಿಯನ್ನು ಇವರು ವಿರೋಧಿಸಿದರಲ್ಲದೆ, 1562ರ ಮತೀಯ ಯುದ್ಧಗಳನ್ನು ಪ್ರಚೋದಿಸಿದರು. ಹ್ಯೂಜೆನೋಗಳನ್ನು ಫ್ರಾಂಕಾಯ್ ಸೋಲಿಸಿದ. ಅನಂತರ ಅವನೇ ಕೊಲೆಗೆ ಈಡಾದ. ಚಾರಲ್ಸ್ ಸ್ಪೇನಿನ ಸಹಾಯಕ್ಕಾಗಿ ಸಂಧಾನ ನಡೆಸಿ, ರಾಜಾಸ್ಥಾನದಲ್ಲಿ 1567-70ರಲ್ಲಿ ಅಧಿಕಾರಸ್ಥನಾಗಿದ್ದ. ಗ್ವೀಸಿನ ಮೂರನೆಯ ಡ್ಯೂಕ್ ಹೆನ್ರಿ ದ ಲೊರೇನ್ (1550-88). ಈತ ಫ್ರಾಂಕಾಯ್ನ ಮಗ. ಸಂತ ಬಾರ್ತೊಲೇಮ್ಯೊ ದಿನದ ಹತ್ಯಾಕಾಂಡಕ್ಕೆ ಹಂಚಿಕೆ ಹಾಕಿದವನು ಈತ. 1576ರ ಅನಂತರ ಇವನು ಕೆಥೊಲಿಕ್ ಕೂಟ ಸ್ಥಾಪಿಸಿದ. ಈತ ಮಹತ್ವಾಕಾಂಕ್ಷಿ. 3ನೆಯ ಹೆನ್ರಿಯ ವಿರುದ್ಧ ಪ್ಯಾರಿಸಿನ ಬಂಡಾಯವನ್ನು ಎತ್ತಿಕಟ್ಟಿ, ಆ ನಗರವನ್ನು ವಶಪಡಿಸಿಕೊಂಡಿದ್ದ. ದೊರೆ ಇವನೊಂದಿಗೆ ಒಪ್ಪಂದ ಮಾಡಿಕೊಂಡಂತೆ ನಟಿಸಿ ಇವನನ್ನು ಕೊಲ್ಲಿಸಿದ. ಇವನ ಸೋದರ ಲೂಯಿ ದ ಲೊರೇನನನ್ನೂ (1555-1588) ದೊರೆ ಆಗಲೇ ಕೊಲ್ಲಿಸಿದ (1588), ಕ್ಯಾತೊಲಿಕ್ ಲೀಗಿನ ನಾಯಕತ್ವ ಇವರ ಸೋದರ ಹೆನ್ರಿ ದ ಲೊರೇನನಿಗೆ (1614-1664) ಸಂದಿತು. ಈತ ಗ್ವೀಸಿನ 5ನೆಯ ಡ್ಯೂಕ್. ಇವನು ರಿಚಲೂ ವಿರುದ್ಧ ಪಿತೂರಿ ಮಾಡಿದ. ನೇಪಲ್ಸನ್ನು ಹಿಡಿದುಕೊಳ್ಳಲು ಪ್ರಯತ್ನಿಸಿ ಸ್ಪೇನಿನಲ್ಲಿ ಸ್ವಲ್ಪಕಾಲ ಬಂದಿಯಾಗಿದ್ದು ಅನಂತರ ಇವನು 14ನೆಯ ಲೂಯಿಯ ದರ್ಬಾರು ಬಕ್ಷಿಯಾಗಿದ್ದ. ಇವನ ಸೋದರನ ಮಗ ಲೂಯಿ ಜೋಸೆಫ್ (1650-1671) 6ನೆಯ ಡ್ಯೂಕ್. ಇವನು 13ನೆಯ ಲೂಯಿಯ ಸೋದರನ ಮಗಳಾದ ಎಲಿಜ಼ಬೆತಳನ್ನು ಮದುವೆಯಾಗಿದ್ದ. ಗ್ವೀಸಿನ 7ನೆಯ ಮತ್ತು ಕೊನೆಯ ಡ್ಯೂಕ್ ಫ್ರಾಂಕಾಯ್ ಜೋಸೆಫ್. ಇವನು ಲೂಯಿ ಜೋಸೆಫನ ಮಗ. ಅಲ್ಲಿಂದ ಮುಂದಕ್ಕೂ ಇದರ ಗಂಡುಸಂತಾನ ಮುಂದುವರೆಯಿತಾದರೂ ಗ್ವೀಸ್ ಡ್ಯೂಕ್ ಪದವಿ ಕೊನೆಗೊಂಡಿತು. 1704ರಲ್ಲಿ ಇದನ್ನು ಬೂರ್ಬನ್ ರಾಜಕುಮಾರರ ಸಲುವಾಗಿ ಮತ್ತೆ ಆರಂಭಿಸಲಾಯಿತಾದರೂ ಇದು 19ನೆಯ ಶತಮಾನದಲ್ಲಿ ಬೂರ್ಬನ್ ಆರ್ಲಿಯನ್ಸ್ ಮನೆತನದಲ್ಲಿ ಸೇರಿಹೋಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ